ಅಮೃತ ಬಳ್ಳಿ
	ದ್ವಿದಳ ಸಸ್ಯಗಳಲ್ಲಿ ಬಿಡಿ ಪುಷ್ಪದಳವರ್ಗಕ್ಕೆ (ಪಾಲಿ ಪೆಟಲೆ) ಸೇರಿದ್ದು ಥಲಾಮಿ ಫ್ಲೋರೇ ಉಪವರ್ಗದ ಮೆನಿಪ್ಪರ್ಮೇಸಿ ಕುಟುಂಬದ ಒಂದು ಪ್ರಭೇದ. ಸಾಮಾನ್ಯವಾಗಿ ಎಲ್ಲೆಲ್ಲೂ ಬೆಳೆಯುತ್ತದೆ. ತೊಗಟೆಯ ಮೇಲೆ ಉದ್ದನೆಯ ಹಳ್ಳತಿಟ್ಟುಗಳಂಥ ಗೆರೆಗಳಿವೆ. ಕಾಂಡದ ಕೆಳಭಾಗದಿಂದ ಹೊರಬಂದು ಭೂಮಿಯ ಮೇಲೆ ಕಾಣುವಂತೆ ಬೆಳೆಯುವ ಬೇರುಗಳಿವೆ. ಇವು ಹಸಿರಾಗಿದ್ದು ಎಲೆಗಳಂತೆ ಆಹಾರ ತಯಾರಿಸಬಲ್ಲವು.

	ಅದರಲ್ಲಿ ಎಲೆ ತೆಳುವಾಗಿ ಹೃದಯದ ಆಕಾರವಾಗಿದ್ದು ಅದರಲ್ಲಿನ ಏಳು ನಾಳಗಳು ಬಲೆಯಂತೆ ಹರಡಿಕೊಂಡಿರುತ್ತವೆ. ತೊಟ್ಟು ನೀಳ. ಮಧ್ಯಾರಂಭಿ ಎಲೆಗಳಿಗಿಂತ ಪುಷ್ಪಮಂಜರಿ ಎಲೆಯ ಕೊಂಕುಳಲ್ಲಿ ಅಥವಾ ಗಿಡದ ತುದಿಯಲ್ಲಿ ಇಲ್ಲವೇ ಹಳೆಯ ದಪ್ಪ ಕಾಂಡದ ಮೇಲೆ ಬೆಳೆಯಬಹುದು.

	ಹೂಗಳು ಏಪ್ರಿಲ್, ಮೇ ತಿಂಗಳುಗಳಲ್ಲಿ ಕಾಣಿಸಿಕೊಳ್ಳುವುವು. ಬಣ್ಣ ಹಳದಿ. ಗಂಡುಹೂಗಳು ಗೊಂಚಲಾಗಿದ್ದು ಹೆಣ್ಣುಹೂಗಳು ಬಿಡಿಯಾಗಿರುತ್ತವೆ. ಎಲೆಯುದುರಿದ ಮೇಲೆ ಹೂ ಬಿಡುತ್ತದೆ. ಪುಷ್ಪಪತ್ರ ಮೊನಚು. ತೀರ ಕೆಳಗಿನ ಪುಷ್ಪ ಪತ್ರಗಳು ಸ್ವಲ್ಪಮಟ್ಟಿಗೆ ಎಲೆಯಾಕಾರ ತಾಳಿರಬಹುದು.

	ಗಂಡುಹೂಗಳ ಪುಪ್ಪಪತ್ರಗಳಲ್ಲಿ ಆರು ದಳಗಳಿರುತ್ತವೆ. ಹೊರಗಿನ ಮೂರು ದಳಗಳು ಚಿಕ್ಕವಾಗೂ ಅಂಡಾಕಾರವಾಗೂ ಇರುತ್ತವೆ. ತುದಿ ಮೊನಚು. ಒಳಗಿನ ಮೂರು ದಳಗಳು ಸ್ವಲ್ಪ ಉದ್ದವೂ ಅರ್ಧವೃತ್ತಾಕಾರದವೂ ಆಗಿರುತ್ತವೆ. ಮಕುಟ ದಳಗಳು ಆರು. ದಳದ ಕೆಳಭಾಗ ಉಳಿಯಂತೆ ಚಪ್ಪಟೆಯಾಗಿದ್ದು, ಉಳಿದರ್ಧಭಾಗ ಬಲಕ್ಕೆ ಹೊರಳಿ, ಮೂರು ಭಾಗವಾಗಿ ತುದಿಯಲ್ಲಿ ಕೆಳಮುಖವಾಗಿ ಬಾಗಿರುತ್ತದೆ. ಆರು ಕೇಸರಗಳಿದ್ದು ಅವೆಲ್ಲ ಬಿಡಿ ಬಿಡಿಯಾಗಿರುತ್ತವೆ.

	ಹೆಣ್ಣು ಹೂಗಳಲ್ಲಿ ದಳಗಳು ಆಯತಾಕಾರವಾಗಿ ಉಳಿಯಂತೆ ಚಪ್ಪಟೆಯಾಗಿರುತ್ತವೆ. ಅಂಚು ಸಮನಾಗಿರುತ್ತದೆ. ಅಂಡಾಶಯದಲ್ಲಿ ಮೂರು ಭಾಗಗಳಿದ್ದು ಶಲಾಕಾಗ್ರ ಕವಲೊಡೆದಿರುತ್ತದೆ. ಹಣ್ಣು ಅಷ್ಟಿ ಫಲವಾಗಿದ್ದು (ಡ್ರೂಪ್) ಒಂದರಿಂದ ಮೂರು ವಿಭಾಗಗಳನ್ನೊಳಗೊಂಡಿರುತ್ತದೆ. ಬೀಜಗಳು ತೆಳುವಾಗಿದ್ದು, ಒಂದು ಮೈ ತಗ್ಗಾಗಿಯೂ ಇನ್ನೊಂದು ಉಬ್ಬಾಗಿಯೂ ಇರುತ್ತವೆ.
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ